Sunday, May 17, 2020


ವಿಧಿಪಿತ ನೋನಲ್ಲದೆ ನಿಧಿಪತಿಗಳು ಉಂಟೆ|
ಸಧನನಾಗಿ ಇಪ್ಪೆ ನಿನ್ನ ದಾಸರಿಗಾಗಿ|
ಮಧುಸೂದನ ಜಗನ್ನಾಥವಿಠ್ಠಲರೇಯ |
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ || 2 ||

ಬ್ರಹ್ಮಾದಿ ದೇವತೆಗಳಿಗೆ ತಂದೆಯಾದ ನಿನ್ನಷ್ಟು ದೊಡ್ಡ ನಿಧಿಪತಿಯು ಬೇರೆಯಾರಿದ್ದಾರೆ? ನಿನ್ನ ನಂಬಿ ಬಂದಂತಹ ಭಕ್ತರಿಗೆ ಸದಾ ಧನೌಂತನಾಗಿದ್ದು ಸಂಪತ್ಪ್ರದಾಯಕ ನಾಗಿರುವ ನೀನು, ನಿನ್ನನ್ನು ದ್ವೇಷಿಸುವ ಶತೃಗಳಿಗೆ  ಮರಣ ಸದೃಶವಾಗಿರುವೆ.

ನರಸಿಂಹ ಸುಳಾದಿ


ದುರಿತವನ ಕುಠಾರಿ ದುರ್ಜನ ಕುಲವೈರಿ|
ಶರಣಾಗತ ವಜ್ರ ಪಂಜರ ಕುಂಜರ-1|
ವರ ಸಂರಕ್ಷಕ ಜನ್ಮಮರಣ ರಹಿತ ಮಹಿತ|
ಪರಮ ಕರುಣಾ ಸಿಂಧು ಭಕ್ತ ಬಂದು|
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖ ಪೂರ್ಣ|
ಉರುಗಾಯ ವೈಕುಂಠವರ ಮಂದಿರ ಚಂದಿರ|
ಹರಿಯೆ ಕ್ಷರಾಕ್ಷರ ಪುರುಷೋತ್ತಮ|
ತರಣಿಕೋಟಿ ಸಂಕಾಶ ವಿಮಲಕೇಶ|
ಧುರಗದೊಳಗರ್ಜುನನ ತುರಗ ನಡೆಸಿದ ಸಂ-|
ಗರ ಭಯಂಕರ ಲೋಕೈಕಧೀರ|
ನರಸಿಂಹ ನಿನ್ನ ಪಾದಕೆರಗಿ ಬೇಡಕೊಂಬೆ|
ಮೊರೆ ಹೊಕದಾಸಗೆ ಬಂದ ಭಯವ |
ಪರಿಹಸಿರಿ ಸೌಖ್ಯವ ಕರುಣಿಸು ದಯದಿಂದ|
ಸರುವಂತರ್ಯಾಮಿ ಲೋಕ ಸ್ವಾಮಿ|
ಸ್ಮರಣೆ ಮಾತ್ರದಿ ಅಜಮಿಳಗೆ ಮುಕ್ತಿಯನಿತ್ತೆ|
ಅರಿದೆನೊ ನೀನೀಗ ಪೊರೆವುದೆಮ್ಮೆ |
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ ಪರಿಪಾಲಕನೆಂಬ ಬಿರುದು ನಿನ್ನದ್ದವೆ || 1 ||

ಇದು ದಾಸ ಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರು ರಚಿಸಿದ ನರಸಿಂಹ ಸುಳಾದಿಯ ಮೊದಲನೆಯ ನುಡಿಯಾಗಿದೆ.  ಇದರಲ್ಲಿ ಭಗವಂತನ ಸ್ತುತಿಯನ್ನು ಮಾಡುತ್ತಾ ಅವನ ಮಹಿಮೆಗಳನ್ನು ಕೊಂಡಾಡುತ್ತಾರೆ.  ಭಗವಂತನ ಕಷ್ಟಗಳೆಂಬ ಕಾಡಿಗೆ ಕೊಡಲಿಯಂತೆ, ದುರ್ಜನರ ಕುಲಕ್ಕೆ ವೈರಿಯೂ, ಶರಣಾಗತನಾದ ಭಕ್ತನಿಗೆ ಗಜೇಂದ್ರನನ್ನು ರಕ್ಷಿಸಿದಂತೆ ರಕ್ಷಿಸುವ ಕರುಣಾ ಮಯ, ಅವನು ಸ್ವರತ, ಸ್ವತಂತ್ರ, ಜಗತ್ತನ್ನೆಲ್ಲಾ ಆವರಿಸಿರುವವ, ಕ್ಷರಾಕ್ಷರ,   ಪುರುಷೋತ್ತಮ, ಶೇಷ ಶಯನ, ವೈಕುಂಠದಲ್ಲಿ ವಾಸವಾಗಿರುವವ, ಧರೆಯೊಳಗೆ ಅರುಜನನ ಸಾರಥಿಯೆನಿಸಿದವ ನರಸಿಂಹ ದೇವರೇ ನಿಮ್ಮ ಪಾದಕ್ಕೆರಗಿ ನಮಿಸುವೆ, ನಿನ್ನನ್ನು ಮೊರೆ ಹೊಕ್ಕಿರುವ ದಾಸಗೆ ಬಂದಿರುವ ಭಯವನನು ಪರಿಹರಿಸಿ ಸಲುಹು, ನೀನು ಸರ್ವಂತರ್ಯಾಮಿ, ಲೋಕಕ್ಕೆಲ್ಲಾ ಸ್ವಾಮಿ ನಿನ್ನನ್ನು ಸ್ಮರಣೆ ಮಾಡಿದ ಅಜಮಿಳಗೆ ಮುಕ್ತಿಯನ್ನು ನೀಡಿದ ನಿನಗೆ ಶರಣು ಬಂದಿರುವ ಭಕ್ತನ ಪೊರೆಯುವ ಹೇ ಜಗನ್ನಾಥವಿಠ್ಠಲ ಸ್ವಾಮಿ ಭಕ್ತ ಪರಿಪಾಲಕನೆಂಬ ಬಿರುದನ್ನನು ಹೊಂದಿರುವ ನೀನು ನಮ್ಮನ್ನು ಸಲಹು ಎಂಬುದಾಗಿ ಪ್ರಾರ್ಥಿಸುತ್ತಾರೆ.


Monday, May 4, 2020

ಆತ್ಮ ಸಮ್ಮಾನ ಅಥವಾ ಗೌರವ






ಏನು ಹೀಗೆ ಅಂದರೆ ? ನಮ್ಮ ದೃಷ್ಟಿಯಲ್ಲಿ ನಾವು ಗೌರವಾನ್ವಿತರಾಗಿ ಉಳಿಯುವುದು. ಯಾವುದೇ ಕೆಟ್ಟ ಹಾದಿಯಲ್ಲಿ ನಡೆಯದೇ ನಮ್ಮತನವನ್ನು ಉಳಿಸಿ ಕೊಳ್ಳುವುದು. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸೆಲ್ಫ ರೆಸ್ಪೆಕ್ಟ ಅಂತಾರೆ. ನಮಗೆ ನಾವೇ ಬೆಲೆ ಕೊಡದೇ ಇದ್ದರೆ ಬೆರೆಯವ್ರು ಹೇಗೆ ಕೊಟ್ಟಾರು ಅಲ್ಲವೇ? ವ್ಯಕ್ತಿ ಹೆಣ್ಣೆ ಇರಲಿ ಗಂಡೇ ಇರಲಿ ಬೇರೆಯವರ ಅಡಿ ಆಳು ಅಥವಾ ಬೇರೆಯವರ ಕೈಗೊಂಬೆಯಾಗಿ ಬಾಳುವುದಕ್ಕಿಂತ ಕಷ್ಟ ಪಟ್ಟು ದುಡಿದು  ಆತ್ಮ ಗೌರವದಿಂದ ಬದುಕುವುದು ಉತ್ತಮ ಜೀವನ. ಮತ್ತೊಬ್ಬರ ಹಂಗಿನಲ್ಲಿ ನಮಗೆ ಯಾವುದೇ ಬೆಲೆ ಇಲ್ಲದೇ ಬದುಕುವ ಬದುಕು ಹೀನವಾದುದು. ನಮ್ಮತನವಿಲ್ಲದೇ ಒಂದು ಕೀಲು ಗೊಂಬೆಯಾಗಿ ಬಾಳುವುದು, ಮತ್ತೊಬ್ಬರ ಕೈ ಗೊಂಬೆಯಾಗುವುದಕ್ಕಿಂತ ಆತ್ಮ ಗೌರವದಿಂದ ಸಾಯುವುದು ಲೇಸು

ಇಂದಿನ ಪ್ರಪಂಚದಲ್ಲಿ ಈ ರೀತಿ ಆತ್ಮ ಗೌರವದಿಂದ ಬದುಕಲು ಪ್ರಯತ್ನಿಸುವವರು ಔಟ್‌ಡೇಟೆಡ್‌ ಎಂಬ ಭಾವನೆ ಇದೆ. ಯಾಕೆಂದರೆ ಎಲ್ಲರೂ ಹೊಗಳು ಭಟ್ಟರು, ಕಾರ್ಯವಾಸಿ ಕತ್ತೆ ಕಾಲು ಹಿಡಿಯಬಹುದೆಂಬ, ಅಥವಾ ಹಣ ಅಧಿಕಾರ ಇರುವವರು ತಾವು ಏನನ್ನಾದರೂ ಕೊಂಡು ಕೊಂಡೇವು ಎನ್ನುವ ಸೊಕ್ಕು ಮಾತನಾಡಿಸುತ್ತದೆ. ಯಾವುದೇ ಸಂಬಂಧವಿರಲಿ ವ್ಯಕ್ತಿ ಇರಲಿ ಪರಸ್ಪರ ಗೌರವ, ವಿಶ್ವಾಸವಿದ್ದಾಗ ಮಾತ್ರ ಜೀವನ ಸುಗಮ.

ಹೆಣ್ಣು ಮಕ್ಕಳಂತೂ ಹೆಜ್ಜೆ ಹೆಜ್ಜೆಗೂ ಆತ್ಮ ಸಮ್ಮಾನ ಅಥವಾ ಗೌರವಕ್ಕಾಗಿ ಹೋರಾಡುವ ಪರಿಸ್ಥಿತಿ ದಿನ ನಿತ್ಯವೂ ಇದೆ.  ಸಾಮಾಜ ಹೆಣ್ಣಿಗೆ ಕ್ಷಮಯಾ ಧರಿತ್ರಿ ಅಂತ ಕಲಿಸಲು ಪ್ರಯತ್ನಿಸುತ್ತದೆ ಆದರೆ ಗಂಡಿನ ರಾವಣ ಕಂಸನಾಗ ಬೇಡ ಎನ್ನುವುದಿಲ್ಲ.  ಇರಲಿ ಹೊಂದಿಕೊಂಡು ಹೋಗು ಅನ್ನುವುದು ಸರ್ವೇ ಸಾಮಾನ್ಯ ಹಾಗೆಂದು ದಬ್ಬಾಳಿಕೆಯನ್ನು ಮಾಡದ ಹೆಣ್ಣು ಮಕ್ಕಳಿದ್ದಾರೆ ಎಂದುಕೊಳ್ಳಬೇಡಿ ಅವರ ಸಂಖ್ಯೆಯೂ ಕಡಿಮೆ ಇಲ್ಲ.

ಆದರೆ ಆತ್ಮಗೌರವನ್ನು ಹೆಣ್ಣಾಗಲಿ ಗಂಡಾಗಲಿ ಬಿಡಬಾರದು. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಬಾರದು. ಸ್ವಾಭಿಮಾನವನ್ನು ಬಿಟ್ಟು ಬದುಕಿದರೆ ಜೀವಂತ ಶವಕ್ಕೆ ಸಮ

ಮಾಧುರಿ

Tuesday, April 28, 2020

ಪೀತಿ



ನಮ್ಮ ಕನ್ನಡ ಭಾಷೆ ಬಹಳ ವಿಶಾಲವಾದದ್ದು, ಒಂದೇ ಪದಕ್ಕೆ ಹತ್ತಾರು ಭಾವನೆಗಳನ್ನು ಬಳಸಬೇಕು ಅಂತಿಲ್ಲ.  ಅದಕ್ಕೆ ಉತ್ತಮ ಉದಾಹರಣೆ ಈ ಪ್ರೀತಿ ಎನ್ನುವ ಪದ. ಆಂಗ್ಲದಲ್ಲಿ ಲವ್‌ ಅಂದರೆ ಪ್ರೀತಿ, ಪ್ರೇಮ, ಪ್ರಣಯ ಹೀಗೆ ಬಹಳಷ್ಟು ಪದಗಳ ಸಮಾನಾರ್ಥಕ ಪದವಾಗುತ್ತದೆ.  ನಮ್ಮಲ್ಲಿ ತಾಯಿ ಮಕ್ಕಳ ಪ್ರೀತಿಗೆ ವಾತ್ಸಲ್ಯ ಎನ್ನುತ್ತೇವೆ, ಹುಡುಗ-ಹುಡುಗಿ ಪ್ರೀತಿಗೆ ಪ್ರಣಯ ಅನ್ನುತ್ತೇವೆ.  ನಮ್ಮಲ್ಲಿ ಒಂದೇ ಭಾವಕ್ಕೆ ಹಲವಾರು ಪದಗಳು.  ಪ್ರೀತಿಯ ಅರ್ಥ ಖಚಿತವಾಗಿ ಹೇಳಲು ಕಷ್ಟು ಸಾಮಾನ್ಯವಾಗಿ ನಮಗೆ ಯಾರಾದರೂ ಒಬ್ಬರನ್ನೋ ಅಥವಾ ಯಾವುದೇ ವಸ್ತುವನ್ನು ಬಿಟ್ಟಿರಲಾರದಷ್ಟು ಮೋಹ ಬಂದರೆ ಅದನ್ನು ಪ್ರೀತಿ ಎಂದು ಅರ್ಥ ಮಾಡಿಕೊಳ್ಳುತ್ತೇವೆ.

ಪ್ರಪಂಚ ನಡೆಯುವುದೇ ಈ ಪ್ರೀತಿಯ ಆಧಾರದ ಮೇಲೆ, ಮಗು ಮೊದಲು ಕಾಣುವುದೇ ತಾಯಿಯ ಪ್ರೀತಿಯನ್ನು, ನಂತರ ತಂದೆ, ಸಹೋದರ, ಸಹೋದರಿಯರು, ಬಂಧು ಬಾಂಧವರು,  ನಂತರ ಶಿಕ್ಷಕರು, ಸ್ನೇಹಿತರು ಹೀಗೆ ಪ್ರೀತಿ ತೋರುವ ಜನರ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ.  ಸಣ್ಣ ಮಕ್ಕಳಿದ್ದಾಗ ಈ ಪ್ರೀತಿ ಎಂದರೆ ಏನು ನಾವು ಯಾರನ್ನು ಪ್ರೀತಿಸುತ್ತೇವೆ ನಮ್ಮ ಜೀವನದಲ್ಲಿ ಪ್ರೀತಿ ಪಾತ್ರರು ಯಾರು ಎಂಬ ಅರಿವೇ ಇರುವುದಿಲ್ಲ. ದಿನಗಳೆದಂತೆ ತಿಳುವಳಿಕೆ ಬಂದಂತೆ ಪ್ರೀತಿಯ ಭಾವ ಮನಸ್ಸಿನಲ್ಲಿ ಜಾಗೃತವಾಗುತ್ತದೆ ಮತ್ತು ನಮ್ಮನ್ನು ಯಾರಾದರೂ ಪ್ರೀತಿ ಮಾಡಲಿ ಎಂದು ಭಾವನೆ ಸಹಜವಾಗಿ ಹುಟ್ಟುತ್ತದೆ. ಆಗ ಪ್ರೀತಿಯ ಹುಡುಕಾಟ ಆರಂಭವಾಗುತ್ತದೆ.

ಪ್ರೀತಿಯ ಬಗೆಗೆ ಎಲ್ಲ ಭಾಷೆಗಳಲ್ಲೂ ಕವಿತೆಗಳನ್ನು ಎಷ್ಟೋ ಜನ ಕವಿಗಳು ಬರೆದಿದ್ದಾರೆ. ನನಗೆ ಮನಸ್ಸಿಗೆ ಹಿಡಿಸಿದ್ದು ಜಯಶಂಕರ ಪ್ರಸಾದರ "ಮುಝೆ ಪ್ಯಾರರ್‌ ನ ಮಿಲಾ" ಎಂಬ ಕವಿತೆ ಆ ಕವಿತೆಯ ಆಶಯ ಕವಿ ಒಮ್ಮೆ ಪ್ರೀತಿಯನ್ನು ಹುಡುಕಲು ಹೊರಡುತ್ತಾರೆ ಅವರಿಗೆ ಎಲ್ಲ ಪ್ರೀತಿ ಸಿಗುತ್ತಿಲ್ಲ ಎಂಬ ಭಾವನೆ ಬರುತ್ತದೆ ಅದೇ ನಿಟ್ಟಿನಲ್ಲಿ ಅವರು ಯೋಚಿಸುತ್ತಿರುವಾಗ  ಅವರಿಗೆ ಅನಿಸುತ್ತದೆ, ಇಷ್ಟು ದಿನ ನನ್ನನ್ನೇ ಪ್ರೀತಿ ಮಾಡಲಿ ಎಂದು ಹೊರಟಿದ್ದೆ ಆದ್ದರಿಂದ ಸಿಗುತ್ತಿಲ್ಲ, ನಾನು ಬೇರೆಯವರನ್ನು ಪ್ರೀತಿಸಿದಾಗ ಸಿಗಬಹುದೇನೋ ಎನ್ನುತ್ತಾರೆ.

ಬನ್ನಿ ಪ್ರೀತಿ ಹಂಚೋಣ. ನಿಸ್ವಾರ್ಥ ಪ್ರೀತಿಗೆ ಕಳೆದು ಕೊಳ್ಳೋದು ಏನು ಇಲ್ಲ, ಮಾನವೀಯತೆ, ಸೌಹಾರ್ದತೆ ಎಂಬ ದೊಡ್ಡ ದೊಡ್ಡ ಶಬ್ದ ಎಲ್ಲಾ ಬೇಡ. ಜೀವನಕ್ಕೆ ಸರಳ ದಾರಿ  ಜೀವನದಲ್ಲಿ ಬರುವ ಎಲ್ಲ ವ್ಯಕ್ತಿಗಳನ್ನು ಪ್ರೀತಿಸಿ ನಮಗೆ ಅಂತ ದೊರೆತ ವಸ್ತುಗಳನ್ನು ಪ್ರೀತಿಸಿ ಯಾರಾದರೂ ಪ್ರೀತಿ ತೋರಿಸುತ್ತಾರೆ. ಪ್ರೀತಿ ಜೀವನದ ಸಾರ. ಜೀವನವನ್ನು ಪ್ರೀತಿಸೋಣ, ಜೀವಿಗಳನ್ನು ಪ್ರೀತಿಸೋಣ.

ಮಾಧುರಿ 

Monday, April 27, 2020

ಸೌಂದರ್ಯ



ಸುಂದರವಾದ ವಸ್ತು ಅಥವಾ ವ್ಯಕ್ತಿಯ ಬಾಹ್ಯ ರೂಪಕ್ಕೆ ಮಾತ್ರ ಸೌಂದರ್ಯ ಅನ್ನೊಲ್ಲ.  ಮನಸ್ಸು ಕೂಡ ಸುಂದರವಾಗಿರತ್ತೆ.  ಸೌಂದರ್ಯ ವ್ಯಕ್ತಿ ಅಥವಾ ವಸ್ತುವಿನಲ್ಲಿರುವುದಿಲ್ಲ ನೋಡುವವರ ಕಣ್ಣಿನಲ್ಲಿರುತ್ತದೆ. ಪ್ರಪಂಚದಲ್ಲಿ ಯಾವಾಗಲೂ ಸುಂದರ ಅನಿಸೋದು ಮಕ್ಕಳ ನಗು, ತಾಯಿಯ ಪ್ರೀತಿ, ಭಗವಂತನ ಅದ್ಭುತ ಸೃಷ್ಟಿಯಾದ ಪ್ರಕೃತಿ.

ಕೆಲವರಿಗೆ ಬಣ್ಣ, ರೂಪ ಅಷ್ಟೆ ಸೌಂದರ್ಯ ಅಂದು ಕೊಳ್ಳುವವರಿದ್ದಾರೆ ಬಣ್ಣವೂ ಬದಲಾಗಬಹುದು ರೂಪವೂ ಮಾಸಬಹುದು. ಆದರೆ ಸದಾ ಹಸಿರಾಗಿರುವುದು ಮನುಷ್ಯನ ಮನಸ್ಸು ಮತ್ತು ಆತನ ಸ್ವಭಾವ.  ಮೇಕಪ್‌ ಮಾಡಿಕೊಂಡು ವಿವಿಧ ಶೈಲಿಯ ಉಡುಗೆ-ತೊಡುಗೆಗಳಿದ ಸುಂದರವಾಗಿರುವುದಕ್ಕಿಂತ ನಿಮ್ಮ ವ್ಯಕ್ತಿತ್ವದಿಂದ ನಿಮ್ಮ ಸ್ವಭಾವದಿಂದ ಅಂದವಾಗಿರಿ

ಯಾರೋ ಒಬ್ಬರು ಲಕ್ಷಣವಾಗಿದ್ದಾಗ ನಾವು ಸಹಜವಾಗಿ ನೀವು ತುಂಬ ಸುಂದರವಾಗಿದ್ದೀರಿ ಅಂದು ಬಿಡುತ್ತೇವೆ. ಅವರೊದಿಗೆ ಒಬ್ಬ ಸಾಮಾನ್ಯ ರೂಪಿನ ವ್ಯಕ್ತಿಗೆ ಅಯ್ಯೋ ನಾವು ಚಂದ ಇಲ್ಲ ಎನ್ನುವ ಹೀನತಾ ಭಾವ ಬರಬಹುದು ಅಲ್ಲವೇ? ಮತ್ತೊಬ್ಬರ ಮನಸ್ಸನ್ನು ಅನಾವಶ್ಯಕ ನೋಯಿಸಿ ಇನ್ನೊಬ್ಬರನ್ನು ಹೊಗಳುವುದು ತಪ್ಪಲ್ಲವೇ? ವ್ಯಕ್ತಿತ್ವನ್ನು ಪ್ರೀತಿಸಿ ವ್ಯಕ್ತಿತ್ವವನ್ನು ಆರಾಧಿಸಿ ಸೌಂದರ್ಯ ಕ್ಷಣಿಕ ಎಲ್ಲದಕ್ಕೂ ಒಂದು ಕಾಲ ಮುಂಜಾನೆ ಅರಳಿದ ಹೂವು ಸಂಜೆಗೆ ಬಾಡುತ್ತದೆ. ಯೌವ್ವನದ ಸೌಂದರ್ಯ ಮುಪ್ಪಿನಲ್ಲಿರುವುದಿಲ್ಲ. ಎಲ್ಲ ವ್ಯಕ್ತಿಗಳ ಗುರುತು ಅವರ ಮುಖ ಲಕ್ಷಣದಿಂದ ಗುರುತಿಸಬಹುದು.  ನಿಮ್ಮ ನಗು ನಿಮ್ಮ ಸ್ವಭಾವ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.  ಎಲ್ಲ ಹೂವುಗಳು ಚಂದ ಆದರೆ ಒಂದು ಹೂವಿನ ಉಪಯೋಗ ಒಂದೊಂದು ಬಗೆ ಅದೇ ರೀತಿ ಪ್ರತಿಯೊಬ್ಬ ಜೀವಿಯೂ ಚಂದ ಅವರವರ ಗುಣಗಳು ಅವರನ್ನು ಗೌರವಿಸಿ.

ಪ್ರಪಂಚದಲ್ಲಿ ಎಲ್ಲವೂ ಸುಂದರ ಕೆಟ್ಟದ್ದರಿಂದ ದೂರ ಇದ್ದಾಗ ಪ್ರಪಂಚವೇ ಸುಂದರ.  ಈ ಸುಂದರ ಪ್ರಪಂಚದಲ್ಲಿ ಕೆಟ್ಟದ್ದರಿಂದ ಹಾನಿಗೆ ಒಳಗಾಗುತ್ತಲಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮನೆಯನ್ನು ಸುಂದರವಾಗಿಟ್ಟು ಕೊಳ್ಳೋಣ. ರೋಗ ರುಜಿನಗಳಿಂದ ದೂರವಿರೋಣ. ಆನಂದವಾಗಿರೋಣ

ಮಾಧುರಿ

ಹೊಟ್ಟೆ ಉರಿ (ಜಲಸಿ)



ಏನಿದು ಹೊಟ್ಟೆ ಉರಿ? ಯಾಕೆ ಬರತ್ತೆ? ಯಾರಿಗೆ ಬರತ್ತೆ? ಹೊಟ್ಟೆ ಉರಿ ಬರಲಿಕ್ಕೆ ಮುಖ್ಯ ಕಾರಣ ಅಂದರೆ ನಮ್ಮ ಮನಸ್ಸಿನಲ್ಲಿರುವ ಅಸಮಾಧಾನ ಅಥವಾ ನಾವು ಇಷ್ಟ ಪಟ್ಟ ವಸ್ತು/ವ್ಯಕ್ತಿ ನಮ್ಮೊಂದಿಗೆ ಇಲ್ಲ/ ಬೇರೆಯವರ ಬಳಿ ನಮಗೆ ಬೇಕಾದ್ದು ಇದೆ ನಮ್ಮಲ್ಲಿ ಇಲ್ಲ ಇದೆ ರೀತಿ ಅನೇಕ ಕಾರಣಗಳು ಇರಬಹುದು.

ಈ ರೀತಿಯ ಹೊಟ್ಟೆಯುರಿ ಈಗೀನ ಕಾಲದ್ದೇನಲ್ಲ ಹಿಂದಿನ ಕಾಲದಿಂದಲೂ ಬೆಳೆದು ಬಂದಿದ್ದು ದೇವಾದಿ ದೇವತೆಗಳಿಗೂ ಹೊಟ್ಟೆಯುರಿ ಇತ್ತು. ಮನುಷ್ಯ/ದೇವ/ದಾನವ ಯಾರೇ ಇರಲಿ ಚಂದ ಇರುವ ವಸ್ತು/ವ್ಯಕ್ತ ಅಥವಾ ಮನಸ್ಸಿನ ಹಿಡಿಸಿದ ವ್ಯಕ್ತಿ/ವಸ್ತು ನಮ್ಮನ್ನು ಬಿಟ್ಟು ಬೇರೆ ಯಾರದ್ದೂ ಆಗಬಾರದೆಂಬ ಭಾವನೆ ಹೊಟ್ಟೆಯುರಿಯ ಮೂಲ. ಈ ಹೊಟ್ಟೆಯುರಿಯ ಮೂಲವೇ ಸ್ವಾರ್ಥ.

ದೇವತೆಗಳ ಸಂಪತ್ತನ್ನು ನೋಡಿ ಹೊಟ್ಟೆಯುರಿಯಿಂದ ರಾಕ್ಷಸರು ಒದ್ದಾಡಿದ್ದಾರೆ, ಕೌಸಲ್ಯೆಯ ಮಗ ರಾಜನಾದರೆ ಎಂಬ ಹೊಟ್ಟೆಯುರಿಯಿಂದ ಕೈಕೇಯಿ ರಾಮಾಯಣಕ್ಕೆ ಕಾರಣವಾದಳು, ಕುಂತಿಗೆ ಮಕ್ಕಳಾದ ತನಗೆ ಮಕ್ಕಳಾಗಿಲ್ಲವೆಂದು ಗರ್ಭವನ್ನು ಒಡೆದುಕೊಂಡು ಗಾಂಧಾರಿಯು ಮಹಾಭಾರತದ ಯುದ್ಧದ ಕಾರಣಕರ್ತರಲ್ಲಿ ಒಬ್ಬಳಾದಳು ಓ ಹಾಗಾದರೇ ಹೆಣ್ಣು ಮಕ್ಕಳಿಗೆ ಹೊಟ್ಟಯುರಿ ಅನ್ನಬೇಡಿ ಗಂಡಸರೇನು ಕಡಿಮೆ ಇಲ್ಲ. ದುರ್ಯೋಧನ, ಕರ್ಣ ಹೀಗೆ ಹೆಸರುಗಳು ಸೇರುತ್ತಾ ಹೋಗುತ್ತದೆ.

ಈ ಹೊಟ್ಟೆಯುರಿಯನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬ ಮಾತು ಬಂದರೆ. ನಮ್ಮ ಯೋಗ್ಯತೆ ಅರಿತು ಕೊಂಡು ನಮಗೆ ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕು. ನನ್ನಮ್ಮ ಹೇಳುತ್ತಿದ್ದಳು. ಬೇರೆಯವರ ಎಲೆಯಲ್ಲಿ ಏನಿದೆ ಅಂತ ನೋಡಬೇಡ ನಮ್ಮ ಎಲೆಯಲ್ಲಿ ಹಾಕಿದ್ದನ್ನು ತಿಂದು ತೃಪ್ತಿಯಿಂದ ಇರು ಅಂತ. ನಮ್ಮ ಹಳೆಯ ಕಾಲದ ಕತೆಗಳಲ್ಲಿ, ಪುರಾಣಗಳಲ್ಲಿ ಜನಸಂಪದದಲ್ಲಿ ಬಹಳಷ್ಟು ಉದಾಹರಣೆಗಳಿವೆ ಹೊಟ್ಟೆಯುರಿ ಹೊಂದಿದವರು ಬಹಳ ಕಾಲ ಸುಖವಾಗಿ ಇದ್ದಾರೆಂಬ ಉದಾಹರಣೆ ಇಲ್ಲ. ಇದ್ದುದರಲ್ಲಿ ತೃಪ್ತಿಯಿಂದ ಇರುವುದೇ ಜೀವನ.

ದಯವಿಟ್ಟು ಯಾರನ್ನೂ ಯಾರಿಗೂ ಹೋಲಿಕೆ ಮಾಡಿಕೊಳ್ಳಬೇಡಿ ಎಲ್ಲರಿಗೂ ಅವರದ್ದೇ ಆದ ಸ್ವಂತಿಕೆ ಇರುತ್ತದೆ. ಎಲ್ಲರೂ ಒಂದೊಂದು ವಿಧದಲ್ಲಿ ವಿಶೇಷವಾಗಿಯೇ ಇರುತ್ತಾರೆ. ಜೀವನ ಬಂದ ಹಾಗೆ ಸ್ವೀಕರಿಸಿದಾಗ ಸುಲಭವಾಗುತ್ತದೆ. ನಮ್ಮದಲ್ಲದ ವಸ್ತುವೇ ಆಗಿರಲಿ ವ್ಯಕ್ತಿಯೇ ಆಗಿರಲಿ ಸಿಗಲು ಸಾಧ್ಯವಿಲ್ಲ. ನಮ್ಮ ಬಳಿ ಇದ್ದನ್ನು ಪ್ರೀತಿಸಬೇಕು ಸಂತೋಷದಿಂದ ಇರಬೇಕು. ನಿಲುಕದ ದ್ರಾಕ್ಷಿ ಹುಳಿಯಾಗಿರುವುದಿಲ್ಲ ಅದು ನಮಗೆ ಲಭ್ಯವಿರುವುದಿಲ್ಲ ಅಷ್ಟೆ.  ಹುಲಿಯ ರೀತಿ ಆಗುತ್ತೇನೆಂದು ನರಿ ಮೈ ಸುಟ್ಟು ಗಾಯ ಮಾಡಿಕೊಂಡರೆ ನರಿ ಹುಲಿಯಾಗಲು ಸಾಧ್ಯವೇ? ಜೀವನದ ದೊಡ್ಡ ಪಾಠ ಹಾಸಿಗೆ ಇದ್ದಷ್ಟು ಕಾಲು ಚಾಚು, ಪರರ ಸ್ವತ್ತಿಗೆ ಕಣ್ಣು ಹಾಕಬೇಡ.

ಇದೇನಪ್ಪ ಭಾಷಣ ಮಾಡ್ತಿದ್ದಾಳೆ ಅಂದುಕೊಳ್ಳಬೇಡಿ. ಎಲ್ಲ ಲೇಖನಕ್ಕೂ ಪ್ರೇರಣೆ ಇದ್ದೇ ಇರುತ್ತದೆ. ಹೀಗೆ ಮುಂಜಾನೆ ಪ್ರೇರಣೆ ದೊರಕಿತು. ಬರೆಯಬೇಕಾಗಿ ಬಂತು.  ಈಗಂತೂ ಲಾಕ್‌ ಡೌನ್‌ ಯಾರೋ ಹೊರಗೆ ಹೋಗಿ ಬಂದ್ರ ನಾವು ಹೋಗಿಲ್ಲ, ಅವ್ರ ಮನೇಲಿ ಆರೀತಿ ಆಹಾರ ಮಾಡಿದ್ರೂ ನಾವು ತಿಂದಿಲ್ಲ ಇಂತಹ ಕ್ಷಲ್ಲಕ ಕಾರಣಗಳು ಹೊಟ್ಟೆಯುರಿಗೆ ಕಾರಣ ಇದು ದೊಡ್ಡದಾದಾಗ ಹಾನಿ ಹೊಟ್ಟೆಯುರಿ ಪಟ್ಟವರಿಗೇ ಅಲ್ಲವೇ?

ಮನೆಯಲ್ಲಿಯೇ ಇರಿ, ಆರೋಗ್ಯಕರ ಊಟ ಮಾಡಿ, ಉತ್ತಮ ವಿಚಾರ ಓದಿ ನೋಡಿ, ನಿಮ್ಮ ವ್ಯಕ್ತಿತ್ವವನ್ನು ಕೀಳುಮಟ್ಟಕ್ಕೆ ತೆಗೆದುಕೊಂಡು ಹೋಗದಿರಿ. ಇರುವುದರಲ್ಲೇ ಆನಂದದಿಂದ ಇರುವುದೇ ಜೀವನ

ಮಾಧುರಿ

Saturday, April 25, 2020

ಅಸುರಕ್ಷಿತತೆ‌ಯ ಭಾವನೆ (ಇನ್‌ ಸೆಕ್ಯೂರಡ್‌ ಫೀಲಿಂಗ್)



ಅಸುರಕ್ಷತತೆಯ ಭಾವನೆ ಯಾರಿಗೆ ಯಾಕೆ ಹೇಗೆ ಬರುತ್ತದೆ ಎಂದು ಯೋಚಿಸುವಾಗ ಬಹಳ ವಿಚಾರಗಳು ಚರ್ಚೆಗೆ ಬರುತ್ತದೆ.  ಅಸುರಕ್ಷತತೆಯ ಭಾವ ಯಾರಿಗೆ ಅಂದರೆ ಯಾವ ಯಾವ ವಯಸ್ಸಿನ ಜನರಲ್ಲಿ ನೋಡ ಬಹುದು ಎಂದು ಯೋಚಿಸುವಾಗ ಸಣ್ಣ ಮಗುವಿನಿಂದ ಹಿಡಿದು ಇಂದೋ ನಾಳೆಯೋ ಸಾಯುವ ಮುದುಕರವರಿಗೂ ಕಾಡುತ್ತದೆ. ಯಾಕೆ ಕಾಡುತ್ತದೆ ಎಂದು ಪ್ರಶ್ನೆ ಮಾಡಿಕೊಂಡಾಗ ಹಲವು ಕಾರಣಗಳಿರಬಹುದು ಅಶಕ್ತತೆ, ಆತ್ಮಬಲದ ಕೊರತೆ, ಅಸಹಾಯಕತೆ, ಗಾಬರಿ ಹೀಗೆ ಅನೇಕ ಮನಸ್ಸಿನ ಭಾವನೆಗಳು ಬರುತ್ತವೆ.  ಹೇಗೆ ಬರುತ್ತದೆ ಎಂದಾಗ ಪರಿಸ್ಥಿತಿಯ ಕಾರಣಗಳಿಂದ ಭಾವನೆಗಳ ಒತ್ತಡದಿಂದ ಉಂಟಾಗುತ್ತದೆ.

ಇಂದು ಈ ಅಸುರಕ್ಷತೆಯ ಭಾವನೆಯ ಬಗೆಗೆ ಯಾಕೆ ಮಾತು ಎಂದರೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲರ ಮನದಲ್ಲೂ ಅಸುರಕ್ಷತೆಯ ಭಾವನೆ ಒಂದು ಕ್ಷಣವಾದರೂ ಬಂದು ಹೋಗಿರದೇ ಇರಲಾರದು.  ಸಣ್ಣ ಮಕ್ಕಳಿಗೆ ಅಮ್ಮ ಜೊತೆಯಲ್ಲಿ ಇಲ್ಲದೇ ಹೋದಾಗ ಅವಳು ಎಲ್ಲಿ ಬಿಟ್ಟು ಹೋಗುವಳೋ ಎಂಬ ಭಯ, ಶಾಲೆಗೆ ಹೋಗುವಾಗ ಸ್ನೇಹಿತರು ಜೊತೆಗೆ ಆಡದೇ ಹೋದರೆ, ಅಧ್ಯಾಪಕರು ಕೊಟ್ಟ ಕೆಲಸ ಮಾಡದಾಗ ಬಯ್ಯುವರೆಂಬ ಅಂಜಿಕೆ, ಓದು ಮುಗಿದ ನಂತರ ಕೆಲಸದ ಚಿಂತೆ ಕೆಲಸ ಆದ ಮೇಲೆ ಮದುವೆ ಹೀಗೆ ಸಾಯುವವರೆಗೂ ಚಿಂತೆಗಳ ಸರಮಾಲೆಯು ನಡೆದೇ ಇರುತ್ತದೆ.

ಇಂದಿನ ದಿನದ ಚಿಂತೆ ಭಯವೆಂದರೆ ನಾಳೆ ಏನು? ಬದುಕುತ್ತಿವೋ ಇರುವುದಿಲ್ಲವೋ ಎಂಬ ಭಯ.  ಈ ದಿನದ ಪರಿಸ್ಥಿತಿಗೆ ಅದು ಸಹಜ ಏಕೆಂದರೆ ಅಸುರಕ್ಷತೆ ಎಲ್ಲ ಕಡೆಯೂ ತಾಂಡವವಾಡುತತಿದೆ. ಬಹಳ ದಿನ ಮನೆಯಿಂದ ಹೊರ ಬರಲೇ ಹೆದರುವ ಸಂದರ್ಭ ಬಂದಿರುವದರಿಂದ ಎಲ್ಲರೂ ಭಯಭೀತರಾಗಿದ್ದಾರೆ.

ಈ ಅಸುರಕ್ಷತೆಯ ಭಾವನೆಯಿಂದ ಹೊರಬರಲು ನಾವು ಅನುಸರಿಸಬೇಕಾದ ಮಾರ್ಗವೆಂದರೆ ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಲಿ, ನಮ್ಮನ್ನು ಜೀವಂತ ಇಟ್ಟಿರುವ ಭಗವಂತನ ಮೇಲೆ ನಂಬಿಕೆ ಇರಲಿ. ಜೊತೆಗೆ ಇರುವವರ ಬಗೆಗೂ ನಂಬಿಕೆ ಇರಲಿ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರಲ್ಲೂ ಅಸ್ಥಿರತೆಯ ಭಾವನೆ ಇದ್ದೇ ಇದೆ ಹಾಗೆಂದು ಎಲ್ಲರ ಮೇಲೆ ಅನುಮಾನ ಸಲ್ಲದು, ಎಲ್ಲಕ್ಕೂ ಮೊದಲು ನಮ್ಮನ್ನು ಇಷ್ಟು ದಿನ ಕಾಪಾಡಿದ ಭಗವಂತನ ಮೇಲೆ ಶ್ರದ್ಧೆ ಇರಲಿ ಅವನು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಇರಲಿ. ಮನಸ್ಸು ಒಂದು ಮರ್ಕಟದಂತೆ ಇಲ್ಲ ಸಲ್ಲದ ಅನುಮಾನಗಳು ಗಾಳಿ ಮಾತಿಗೆ ಕಿವಿಗೊಡದೇ, ನಾವು ಅನುಸರಿಸಬೇಕಾದ ಎಲ್ಲ ಮುಂಜಾಗ್ರತಾ ಕ್ರಮವನ್ನು ಅನುಸರಿಸೋಣ. ಮಾಸ್ಕ್‌ ಧರಿಸಿ ಹೊರಗೆ ಹೋಗೋಣ, ದಿನದಲ್ಲಿ ನಾಲ್ಕಾರು ಬಾರಿ ಕೈ ತೆಳೆದು ಶುದ್ಧವಾಗಿರೋಣ. ಸ್ವಚ್ಛತೆ ನಮದಷ್ಟೆ ಅಲ್ಲ ಪರಿಸರವನ್ನು ಸ್ವಚ್ಛವಾಗಿಡೋಣ.

ಕೆಲವೊಂದು ಹೇಡಿಗಳು ಆತ್ಮಹತ್ಯೆ ಅಥವಾ ಬೇರೆ ಯಾವುದೇ ರೀತಿಯ ಜೀವ ಹಾನಿ, ಮಾನಸಿಕ ಸ್ಥಿಮೀತ ಕಳೆದೊಂಡು ಒದ್ದಾಡುವದನನು ಬಿಟ್ಟು, ಸಕಾರತ್ಮಕ ಭಾವನೆಗಳನ್ನು ಜಾಗೃತಗೊಳಿಸೋಣ. ಏಲ್ಲ ಸಂದರ್ಭದಲ್ಲೂ ಆಸೆಯೇ ದುಃಖಕ್ಕೆ ಕಾರಣವಲ್ಲ, ಆದರೆ ಆಶಾ ಭಾವನೆಯೇ ಸದಾ ಕಾಲ ಉತ್ಸಾಹಕ್ಕೆ ಕಾರಣ ಜೀವನಕ್ಕೆ ಕಾರಣ ಎನ್ನಬಹುದು. 

ಮನೆಯಲ್ಲಿಯೇ ಇರಿ, ಧೈರ್ಯದಿಂದ ಇರಿ, ಸುರಕ್ಷತೆಯಿಂದ ಸುರಕ್ಷಿತವಾಗಿರಿ

ಮಾಧುರಿ