ಏನಿದು ಹೊಟ್ಟೆ ಉರಿ? ಯಾಕೆ ಬರತ್ತೆ? ಯಾರಿಗೆ ಬರತ್ತೆ? ಹೊಟ್ಟೆ ಉರಿ ಬರಲಿಕ್ಕೆ ಮುಖ್ಯ ಕಾರಣ ಅಂದರೆ ನಮ್ಮ ಮನಸ್ಸಿನಲ್ಲಿರುವ ಅಸಮಾಧಾನ ಅಥವಾ ನಾವು ಇಷ್ಟ ಪಟ್ಟ ವಸ್ತು/ವ್ಯಕ್ತಿ ನಮ್ಮೊಂದಿಗೆ ಇಲ್ಲ/ ಬೇರೆಯವರ ಬಳಿ ನಮಗೆ ಬೇಕಾದ್ದು ಇದೆ ನಮ್ಮಲ್ಲಿ ಇಲ್ಲ ಇದೆ ರೀತಿ ಅನೇಕ ಕಾರಣಗಳು ಇರಬಹುದು.
ಈ ರೀತಿಯ ಹೊಟ್ಟೆಯುರಿ ಈಗೀನ ಕಾಲದ್ದೇನಲ್ಲ ಹಿಂದಿನ ಕಾಲದಿಂದಲೂ ಬೆಳೆದು ಬಂದಿದ್ದು ದೇವಾದಿ ದೇವತೆಗಳಿಗೂ ಹೊಟ್ಟೆಯುರಿ ಇತ್ತು. ಮನುಷ್ಯ/ದೇವ/ದಾನವ ಯಾರೇ ಇರಲಿ ಚಂದ ಇರುವ ವಸ್ತು/ವ್ಯಕ್ತ ಅಥವಾ ಮನಸ್ಸಿನ ಹಿಡಿಸಿದ ವ್ಯಕ್ತಿ/ವಸ್ತು ನಮ್ಮನ್ನು ಬಿಟ್ಟು ಬೇರೆ ಯಾರದ್ದೂ ಆಗಬಾರದೆಂಬ ಭಾವನೆ ಹೊಟ್ಟೆಯುರಿಯ ಮೂಲ. ಈ ಹೊಟ್ಟೆಯುರಿಯ ಮೂಲವೇ ಸ್ವಾರ್ಥ.
ದೇವತೆಗಳ ಸಂಪತ್ತನ್ನು ನೋಡಿ ಹೊಟ್ಟೆಯುರಿಯಿಂದ ರಾಕ್ಷಸರು ಒದ್ದಾಡಿದ್ದಾರೆ, ಕೌಸಲ್ಯೆಯ ಮಗ ರಾಜನಾದರೆ ಎಂಬ ಹೊಟ್ಟೆಯುರಿಯಿಂದ ಕೈಕೇಯಿ ರಾಮಾಯಣಕ್ಕೆ ಕಾರಣವಾದಳು, ಕುಂತಿಗೆ ಮಕ್ಕಳಾದ ತನಗೆ ಮಕ್ಕಳಾಗಿಲ್ಲವೆಂದು ಗರ್ಭವನ್ನು ಒಡೆದುಕೊಂಡು ಗಾಂಧಾರಿಯು ಮಹಾಭಾರತದ ಯುದ್ಧದ ಕಾರಣಕರ್ತರಲ್ಲಿ ಒಬ್ಬಳಾದಳು ಓ ಹಾಗಾದರೇ ಹೆಣ್ಣು ಮಕ್ಕಳಿಗೆ ಹೊಟ್ಟಯುರಿ ಅನ್ನಬೇಡಿ ಗಂಡಸರೇನು ಕಡಿಮೆ ಇಲ್ಲ. ದುರ್ಯೋಧನ, ಕರ್ಣ ಹೀಗೆ ಹೆಸರುಗಳು ಸೇರುತ್ತಾ ಹೋಗುತ್ತದೆ.
ಈ ಹೊಟ್ಟೆಯುರಿಯನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬ ಮಾತು ಬಂದರೆ. ನಮ್ಮ ಯೋಗ್ಯತೆ ಅರಿತು ಕೊಂಡು ನಮಗೆ ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕು. ನನ್ನಮ್ಮ ಹೇಳುತ್ತಿದ್ದಳು. ಬೇರೆಯವರ ಎಲೆಯಲ್ಲಿ ಏನಿದೆ ಅಂತ ನೋಡಬೇಡ ನಮ್ಮ ಎಲೆಯಲ್ಲಿ ಹಾಕಿದ್ದನ್ನು ತಿಂದು ತೃಪ್ತಿಯಿಂದ ಇರು ಅಂತ. ನಮ್ಮ ಹಳೆಯ ಕಾಲದ ಕತೆಗಳಲ್ಲಿ, ಪುರಾಣಗಳಲ್ಲಿ ಜನಸಂಪದದಲ್ಲಿ ಬಹಳಷ್ಟು ಉದಾಹರಣೆಗಳಿವೆ ಹೊಟ್ಟೆಯುರಿ ಹೊಂದಿದವರು ಬಹಳ ಕಾಲ ಸುಖವಾಗಿ ಇದ್ದಾರೆಂಬ ಉದಾಹರಣೆ ಇಲ್ಲ. ಇದ್ದುದರಲ್ಲಿ ತೃಪ್ತಿಯಿಂದ ಇರುವುದೇ ಜೀವನ.
ದಯವಿಟ್ಟು ಯಾರನ್ನೂ ಯಾರಿಗೂ ಹೋಲಿಕೆ ಮಾಡಿಕೊಳ್ಳಬೇಡಿ ಎಲ್ಲರಿಗೂ ಅವರದ್ದೇ ಆದ ಸ್ವಂತಿಕೆ ಇರುತ್ತದೆ. ಎಲ್ಲರೂ ಒಂದೊಂದು ವಿಧದಲ್ಲಿ ವಿಶೇಷವಾಗಿಯೇ ಇರುತ್ತಾರೆ. ಜೀವನ ಬಂದ ಹಾಗೆ ಸ್ವೀಕರಿಸಿದಾಗ ಸುಲಭವಾಗುತ್ತದೆ. ನಮ್ಮದಲ್ಲದ ವಸ್ತುವೇ ಆಗಿರಲಿ ವ್ಯಕ್ತಿಯೇ ಆಗಿರಲಿ ಸಿಗಲು ಸಾಧ್ಯವಿಲ್ಲ. ನಮ್ಮ ಬಳಿ ಇದ್ದನ್ನು ಪ್ರೀತಿಸಬೇಕು ಸಂತೋಷದಿಂದ ಇರಬೇಕು. ನಿಲುಕದ ದ್ರಾಕ್ಷಿ ಹುಳಿಯಾಗಿರುವುದಿಲ್ಲ ಅದು ನಮಗೆ ಲಭ್ಯವಿರುವುದಿಲ್ಲ ಅಷ್ಟೆ. ಹುಲಿಯ ರೀತಿ ಆಗುತ್ತೇನೆಂದು ನರಿ ಮೈ ಸುಟ್ಟು ಗಾಯ ಮಾಡಿಕೊಂಡರೆ ನರಿ ಹುಲಿಯಾಗಲು ಸಾಧ್ಯವೇ? ಜೀವನದ ದೊಡ್ಡ ಪಾಠ ಹಾಸಿಗೆ ಇದ್ದಷ್ಟು ಕಾಲು ಚಾಚು, ಪರರ ಸ್ವತ್ತಿಗೆ ಕಣ್ಣು ಹಾಕಬೇಡ.
ಇದೇನಪ್ಪ ಭಾಷಣ ಮಾಡ್ತಿದ್ದಾಳೆ ಅಂದುಕೊಳ್ಳಬೇಡಿ. ಎಲ್ಲ ಲೇಖನಕ್ಕೂ ಪ್ರೇರಣೆ ಇದ್ದೇ ಇರುತ್ತದೆ. ಹೀಗೆ ಮುಂಜಾನೆ ಪ್ರೇರಣೆ ದೊರಕಿತು. ಬರೆಯಬೇಕಾಗಿ ಬಂತು. ಈಗಂತೂ ಲಾಕ್ ಡೌನ್ ಯಾರೋ ಹೊರಗೆ ಹೋಗಿ ಬಂದ್ರ ನಾವು ಹೋಗಿಲ್ಲ, ಅವ್ರ ಮನೇಲಿ ಆರೀತಿ ಆಹಾರ ಮಾಡಿದ್ರೂ ನಾವು ತಿಂದಿಲ್ಲ ಇಂತಹ ಕ್ಷಲ್ಲಕ ಕಾರಣಗಳು ಹೊಟ್ಟೆಯುರಿಗೆ ಕಾರಣ ಇದು ದೊಡ್ಡದಾದಾಗ ಹಾನಿ ಹೊಟ್ಟೆಯುರಿ ಪಟ್ಟವರಿಗೇ ಅಲ್ಲವೇ?
ಮನೆಯಲ್ಲಿಯೇ ಇರಿ, ಆರೋಗ್ಯಕರ ಊಟ ಮಾಡಿ, ಉತ್ತಮ ವಿಚಾರ ಓದಿ ನೋಡಿ, ನಿಮ್ಮ ವ್ಯಕ್ತಿತ್ವವನ್ನು ಕೀಳುಮಟ್ಟಕ್ಕೆ ತೆಗೆದುಕೊಂಡು ಹೋಗದಿರಿ. ಇರುವುದರಲ್ಲೇ ಆನಂದದಿಂದ ಇರುವುದೇ ಜೀವನ
ಮಾಧುರಿ
No comments:
Post a Comment