Saturday, April 25, 2020

ಅಭಿವ್ಯಕ್ತಿ ಸ್ವಾತಂತ್ರ್ಯ



ಏನಪ್ಪಾ ವಿವಾದಿತ ವಿಷಯಕ್ಕೆ ಕೈ ಹಾಕಿದಳು ಅಂದುಕೊಳ್ಳುತ್ತಿರಬಹುದು.  ಅನಾದಿ ಕಾಲದಿಂದಲೂ ಸಮಾಜದ ಕಟ್ಟಕಡೆಯ ಜೀವಿಗೆ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಸಮಸ್ಯೆಯನ್ನು ಎದುರಿಸಿರುವ ಸಾಧ್ಯತೆ ಬಹಳ ಇದೆ. ಕೆಲವು ಹೇಳಿಕೊಳ್ಳಬಹುದು ಇನ್ನು ಕೆಲವು ಹೇಳಲಾಗದು.  ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸಣ್ಣ ಮಕ್ಕಳಿಗೆ, ರಾಜನ ಆಸ್ಥಾನದಲ್ಲಿ ಕೆಲಸ ಮಾಡುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇರಲಿಲ್ಲ. ಆಧುನಿಕ ಭಾರತದಲ್ಲಿ ಸಾಂವಿಧಾನಿಕವಾಗಿ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ.

ಆದರೂ ಕೆಲವು ಜನರಿಗೆ ತಮ್ಮ ಅಭಿಪ್ಯಾಯ ವ್ಯಕ್ತ ಪಡಿಸುವುದು ಕಿರಿಕಿರಿ ಎನಿಸುತ್ತದೆ. ನಾನು ರಾಜಕೀಯ ಅಥವಾ ಪತ್ರಿಕೋದ್ಯಮದ ಬಗೆಗೆ ಹೇಳಲು ಹೊರಟಿಲ್ಲ.  ಮನೆಯಲ್ಲಿ ದೊಡ್ಡವರ ಅಭಿಪ್ರಾಯಕ್ಕೆ ಬದಲಾಗಿ ನಾವು ಮಾತನಾಡಿದರೆ ಅವರು ಇಷ್ಟ ಪಡುವುದಿಲ್ಲ, ಆ ವಿಷಯವನ್ನು ಬಿಟ್ಟು ಬೇರೆ ವಿಷಯದಲ್ಲಿ ಬೈಯ್ಯುತ್ತಾರೆ. ನಮ್ಮ ಸಂಬಂಧಿಕರು ಯಾವುದೋ ರೀತಿಯಲ್ಲಿ ಸಹಾಯ ಮಾಡಿರುತ್ತಾರೆ ಅವರ ಅಭಿಪ್ರಾಯಕ್ಕೆ ನಾವು ಸಮರ್ಥನೆ ಮಾಡದೇ ಹೋದಾಗ ಅವರೂ ಕೂಡ ನಮ್ಮ ಬಗ್ಗೆ ಅನೇಕ ರೀತಿಯ ಅಸಮಾಧಾನ ವ್ಯಕ್ತ ಪಡಿಸುತ್ತಾರೆ.  ಶಾಲಾ ಕಾಲೇಜಿಗಳಲ್ಲಿ ಅಧ್ಯಾಪಕರ ಯಾವುದೇ ಅಭಿಪ್ರಾಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬಂದಲ್ಲಿ ಕೆಲವು ಕಡೆ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಈ ರೀತಿಯ ಅಸಮಾಧಾನ ಹೇರಿಕೆ ನಮ್ಮ ಮತ್ತು ಸಮಾಜದ ಆರೋಗ್ಯ ಕೆಡಿಸುತ್ತದೆ. ಆದ್ದರಿಂದ ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸೋಣ ಆದರೆ ದಬ್ಬಾಳಿಕೆಗೆ ಒಳಗಾಗುವುದು ಬೇಡ. ಜೀವನಕ್ಕೆ ಎರಡೇ ಮಾರ್ಗವಿರುವುದಿಲ್ಲ. ಮೂರನೆಯದಾದ ಒಂದು ಮಾರ್ಗವಿರುತ್ತದೆ. ತಟಸ್ಥ ಮಾರ್ಗ ಅವರನ್ನು ಅಸಮಾಧಾನ ಪಡಿಸುವುದು ಬೇಡ ನಾವು ಹೇರಿಕೆ ಮಾಡಿಕೊಳ್ಳುವುದು ಬೇಡ. ಅನಿವಾರ್ಯತೆ ಬಂದಾಗ ವಿರೋಧ ಮಾಡಲೇ ಬೇಕು. ಆದರೂ ಎಲ್ಲ ಪರಿಸ್ಥಿತಿ ಅಥವಾ ಸಮಸ್ಯೆಯಲ್ಲಿ ಮೂರನೆಯ ಮಾರ್ಗ ಶಾಂತಿಯ ಮಾರ್ಗ ತಟಸ್ಥ ಮಾರ್ಗ ಸದಾ ಇದ್ದೇ ಇರುತ್ತದೆ. ಸಮಸ್ಯೆ ಎದುರಿಸುವಾಗ ಪರಿಹಾರ ಮುಖ್ಯವಾದುದು. ದಬ್ಬಾಳಿಕೆಯಾದಾಗ ಹೋರಾಡಬೇಕು ನಿರ್ಲಕ್ಷ್ಯ ಮಾಡುವ ಸಮಯದಲ್ಲಿ ನಿರ್ಲಕ್ಷಿಸಬೇಕು.

ನಾವು ಭಾರತೀಯರು ಶಾಂತಿ ಪ್ರಿಯರು, ತಟಸ್ಥರಾಗಿ ಇರೋಣ. ನಮ್ಮತನಕ್ಕೆ ನಮ್ಮ ಸಂಸ್ಕೃತಿಗೆ ಸಂಸ್ಕಾರಕ್ಕೆ ಧಕ್ಕೆ ಬಂದಾಗ ಕಾರ್ಯ ಪ್ರವರ್ತರಾಗೋಣ. ಸಧ್ಯದ ಪರಿಸ್ಥಿತಿಯ ಸಮಸ್ಯೆ ಕೋರೋನಾ. ಮನೆಯಲ್ಲಿಯೇ ಇರಿ, ಕ್ಷೇಮವಾಗಿರಿ, ಆಯುಷ್ಯವನ್ನು ವೃದ್ಧಿಸಿಕೊಳ್ಳಿರಿ.

ಮಾಧುರಿ

No comments:

Post a Comment